ಟರ್ಷಿಯರಿ -
	ಸುಮಾರು 65 ದಶಲಕ್ಷ ವರ್ಷ ಪ್ರಾಚೀನದಿಂದ 1 ದಶಲಕ್ಷ ವರ್ಷ ಪ್ರಾಚೀನದವರೆಗಿನ ಭೂಮಿಯುಗ; ಈ ಅವಧಿಯಲ್ಲಿ ಮೈದಳೆದ ಶಿಲೆಗಳಿಗೂ ಇವುಗಳಲ್ಲಿ ಸಂಚಯಗೊಂಡಿರುವ ಫಾಸಿಲುಗಳಿಗೂ ಇದೇ ಹೆಸರುಂಟು. ಟರ್ಷಿಯರಿಗೆ ಭೂಮಿಯ ತೃತೀಯ ಯುಗವೆಂಬ ಹೆಸರು ಸಹ ಇದೆ. ಭೂ ಇತಿಹಾಸದಲ್ಲಿ ಇದು ಇತರ ಯುಗಗಳಂತೆ ದೀರ್ಘಕಾಲವನ್ನು ಆವರಿಸದಿದ್ದರೂ ಇದನ್ನೊಂದು ನಿರ್ದಿಷ್ಟ ಯುಗವನ್ನಾಗಿ ಗುರುತಿಸಲು ಸಾಕಾಗುವಷ್ಟು ವೈಶಿಷ್ಟ್ಯಗಳು ಇದರಲ್ಲಿವೆ. ಟರ್ಷಿಯರಿಯ ಮೇಲೆ (ಅಂದರೆ ಕೊನೆಯಲ್ಲಿ) ಕ್ವಾಟರ್ನರಿ ಯುಗ (ವರ್ತಮಾನಕಾಲದಿಂದ 1 ದ.ಲ.ವ. ಪ್ರಾಚೀನದವರೆಗಿನ ಅವಧಿ) ನಿಂತಿದೆ ಎನ್ನುವುದನ್ನೂ ಈ ಯುಗದಲ್ಲೇ ಮನುಷ್ಯ ಮೈದಳೆದದ್ದು ಎನ್ನುವುದನ್ನೂ ಗಮನಿಸಿದರೆ ಜೀವಿವಿಕಾಸದ ದಿಶೆಯಲ್ಲಿ ಈ ಯುಗದ ಮಹತ್ತ್ವ ಏನೆಂಬುದು ಅರಿವಾಗುತ್ತದೆ.

	ಟರ್ಷಿಯರಿ ಯುಗದ ಪ್ರಾರಂಭದಲ್ಲೆ ಭೂಖಂಡಗಳು ಬಲುಮಟ್ಟಿಗೆ ತಮ್ಮ ಈಗಿನ ಆಕಾರವನ್ನು ತಳೆದಿದ್ದುವು. ಎಲ್ಲೊ ಅಲ್ಲೊಂದಿಲ್ಲೊಂದು ಸಣ್ಣಪುಟ್ಟ ಭೂ ಸಮುದ್ರಗಳಿದ್ದುವು. ಟೆತಿಸ್ ಸಾಗರವೇ ಈ ಯುಗದ ಪ್ರಮುಖ ಭೂ ಇಳುಕಲು (ಜಿಯೊಸಿಂಕ್ಲೈನ್). ಇಂದಿನ ಅನೇಕ ಪರ್ವತಗಳು, ಮೈದಾನಗಳು, ಸಮುದ್ರಗಳು, ಸರೋವರಗಳು ಈ ವೇಳೆಗಾಗಲೆ ಮೈದಳೆದು ನೆಲ ಜಲದ ಹಂಚಿಕೆ ಪ್ರಸಕ್ತಸ್ವರೂಪದತ್ತ ಸಾಗಿತ್ತು. ಪೆಸಿಫಿಕ್ ಸಾಗರದ ತೀರಪ್ರದೇಶಗಳು ಹಾಗೂ ಟೆತಿಸ್ ಸಮುದ್ರ ಭಾಗಗಳಲ್ಲಿ ಅತ್ಯಂತ ತೀವ್ರಬದಲಾವಣೆಗಳು ತಲೆದೋರಿದುವು. ಭೂಮಿಯ ಇತರೆಡೆಗಳಲ್ಲೂ ಇದೇ ರೀತಿಯ ಲಕ್ಷಣಗಳು ಉಂಟಾದುವು.

	ಕ್ರಿಟೇಷಸ್ ಯುಗದ (135 ದ.ಲ.ವ. ಪ್ರಾ-65 ದ.ಲ.ವ. ಪ್ರಾ) ಅಂತ್ಯದಿಂದೀಚೆಗೆ ಪ್ರಮುಖ ಜಲಭಾಗಗಳಲ್ಲಿ ಹೆಚ್ಚಿನ ಬದಲಾವಣೆಗಳಾಗಿಲ್ಲ. ಆದರೆ ಭೂಖಂಡಗಳ ಅಂಚಿನಲ್ಲಿದ್ದ ಹಲವಾರು ಪ್ರದೇಶಗಳು ಮೇಲಕ್ಕೆ ಒಯ್ಯಲ್ಪಟ್ಟವು, ಇಲ್ಲವೆ ಕೆಳಕ್ಕೆ ದೂಡಲ್ಪಟ್ಟವು. ಜ್ವಾಲಾಮುಖಿಜ ದ್ವೀಪಗಳೂ ನಿರ್ಮಿತವಾದುವು; ಹಲಕೆಲವು ನೆಲಭಾಗಗಳು ಸವೆತಕ್ಕೂ ಒಳಗಾದುವು. ಹಲವೆಡೆ ದೊಡ್ಡ ದೊಡ್ಡ ಭೂಖಂಡಗಳನ್ನು ಪರಸ್ಪರ ಬಂಧಿಸುವ ನೆಲಸೇತುವೆಗಳ ನಿರ್ಮಾಣ ಕೂಡ ಆಯಿತು. ಪೂರ್ವ ಮತ್ತು ಉತ್ತರ ಆಸ್ಟ್ರೇಲಿಯಗಳ ಪಕ್ಕದ ಪೆಸಿಫಿಕ್ ಸಾಗರಪ್ರದೇಶದಲ್ಲಿ ಇಡೀ ಟರ್ಷಿಯರಿ ಯುಗದುದ್ದಕ್ಕೂ ತೀವ್ರ ಬದಲಾವಣೆಗಳು-ಬೃಹತ್ ಮೇಲ್ಮಡಿಕೆಗಳು, ತಗ್ಗುಗಳು, ಜ್ವಾಲಾಮುಖಿ ಸ್ತೋಮಗಳು ಇತ್ಯಾದಿ-ಗೋಚರವಾಗುತ್ತಲೇ ಇದ್ದುವು. ಇದೇ ರೀತಿ ವೆಸ್ಟ್ ಇಂಡೀಸ್-ಕ್ಯಾರಿಬೀಯನ್ ಸಮುದ್ರ-ಈ ಭೂಭಾಗದಲ್ಲೂ ನಿರಂತರ ಬದಲಾವಣೆಗಳಾಗುತ್ತಲೇ ಇದ್ದುವು.

	ಉತ್ತರ ಮತ್ತು ದಕ್ಷಿಣ ಅಮೆರಿಕಗಳು ಈಗಿನಂತೆ ಒಂದುಗೂಡಿರಲಿಲ್ಲ. ಆದರೂ ಪ್ರಸಕ್ತ ಆಕಾರವನ್ನೇ ಬಲುಮಟ್ಟಿಗೆ ತಳೆದಿದ್ದುವು. ಬೃಹತ್ ಪರ್ವತ ಸ್ತೋಮಗಳಾದ ಅಪಲೇಷಿಯನ್, ರಾಕಿ ಮತ್ತು ಆಂಡಿಸ್ ಈ ವೇಳೆಗಾಗಲೆ ಮೈದೋರಿದ್ದುವು; ಮಿಸಿಸಿಪಿ ತೀರದುದ್ದಕ್ಕೂ ಸುಮಾರು 600 ಮೈಲುಗಳ ತನಕ ನೆಲಭಾಗವನ್ನು ನೀರು ಆವರಿಸಿತ್ತು. ಅಮೆರಿಕದ ಸಂಯುಕ್ತಸಂಸ್ಥಾನ ಮತ್ತು ಕೆನಡಗಳ ಪೆಸಿಫಿಕ್ ಕರಾವಳಿ ಉದ್ದಕ್ಕೂ ಸಮುದ್ರೀಯ ಜಲಜಶಿಲಾಸ್ತರಗಳು ಮೇಲಕ್ಕೆ ಎತ್ತಲ್ಪಟ್ಟು ಇಂದಿನ ಕೋಸ್ಟ್ ರೇಂಜ್ ಪರ್ವತಪಂಕ್ತಿಗಳ ಉದಯವಾಯಿತು. ಇದೇ ವೇಳೆ ವಿಸ್ತಾರ ಪ್ರದೇಶದಲ್ಲಿ ಲಾವಾಸ್ತರಗಳು ಹೊರಹೊಮ್ಮಿ ಕ್ಯಾಸ್ಕೇಡ್ ಶ್ರೇಣಿಯೂ ಮೈದಳೆಯಿತು. ಆದರೆ ದಕ್ಷಿಣ ಅಮೆರಿಕದಲ್ಲಿ ಆರ್ಜಂಟೀನದ ದಕ್ಷಿಣ ಬಯಲು ಪ್ರದೇಶಗಳು ಹಲವಾರು ಬಾರಿ ನೀರಿನಲ್ಲಿ ಮುಳುಗಿದ ದಾಖಲೆಗಳಿದ್ದು ಆಂಡೀಸ್ ಪರ್ವತಶ್ರೇಣಿ ಸತತವಾಗಿ ಮೇಲಕ್ಕೆ ಒಯ್ಯಲ್ಪಟ್ಟ ದಾಖಲೆಗಳೂ ಇವೆ; ಹಾಗೂ ಸತತವಾಗಿ ಹೊರ ಚಿಮ್ಮುತ್ತಿದ್ದ ಜ್ವಾಲಾಮುಖಿಜ ವಸ್ತುಗಳ ಶೇಖರಣೆಯಿಂದ ಇವು ಇನ್ನೂ ಹೆಚ್ಚಿನ ಎತ್ತರವನ್ನು ಮುಟ್ಟಿದುವು. ಆದರೆ ಒಟ್ಟಾಗಿ ಈ ಭೂ ಚಟುವಟಿಕೆಗಳು ಅಷ್ಟು ತೀವ್ರಗತಿಯಲ್ಲಿರಲಿಲ್ಲ. ಇದಕ್ಕೆ ವಿರುದ್ಧವಾಗಿ ಯೂರೋಪ್ ಮತ್ತು ದಕ್ಷಿಣ ಏಷ್ಯಗಳಲ್ಲಿ ತೀವ್ರಗತಿಯ ಭೂ ವ್ಯತ್ಯಾಸಗಳು ಕಾಣಿಸಿಕೊಂಡವು. ಅದರಲ್ಲೂ ಟರ್ಷಿಯರಿ ಯುಗದ ಮಧ್ಯಭಾಗದ ವೇಳೆಗೆ ಬಹುವಿಸ್ತಾರವಾದ ಭೂಪ್ರದೇಶದಲ್ಲಿ ಅತ್ಯಂತ ತೀವ್ರಗತಿಯ ಭೂಚಟುವಟಿಕೆಗಳು ತಮ್ಮ ಮುದ್ರೆಯನ್ನು ಒತ್ತಿರುವುದು ಗಮನಾರ್ಹ. ಯುರೇಷಿಯಾ ಭೂಭಾಗ ಕ್ರಮೇಣ ಮೇಲಕ್ಕೆ ಒಯ್ಯಲ್ಪಟ್ಟು ಟೆತಿಸ್ ಸಗರ ಕಿರಿದಾಯಿತು. ಪೂರ್ವ ಸೈಬೀರಿಯ ಹಾಗೂ ಉತ್ತರ ಮೇರುವಿನತ್ತ ಕಿರಿದಾದ ಸಮುದ್ರಚಾಚನ್ನು ಕಾಣಬಹುದು. ಮತ್ತೆ ಇಯೊಸೀನ್ ಉಪಯುಗದ ವೇಳೆಗೆ (60-40) ಜಲಭಾಗಗಳ ಅಗಲ ಹೆಚ್ಚಾಗಿ ಟೆತಿಸ್ ಮಹಾಸಾಗರವೂ ಬಹು ವಿಸ್ತಾರಗೊಂಡಿತು. ಅಲಿಗೊಸೀನ್ (40-25) ಹಂತದಲ್ಲಿ ಏಸ್ತಾರ ನೆಲಭಾಗಗಳು ಪ್ರವಾಹಕ್ಕೆ ಒಳಗಾದ ದಾಖಲೆಗಳನ್ನು ದಕ್ಷಿಣ ಯೂರೋಪ್ ಮತ್ತು ಆಗ್ನೇಯ ಏಷ್ಯದ ಹಲವಾರು ಕಡೆ ಗುರುತಿಸಬಹುದು. ಮಯೊಸೀನ್ ಉಪಯುಗವೇ (25-11) ಆಲ್ಪ್ಸ್-ಹಿಮಾಲಯ ಪರ್ವತಗಳ ಜನನ ಕಾಲ. ಇದನ್ನು ಭೂ ಇತಿಹಾಸದಲ್ಲಿ ಆಲ್ಪೈನ್ ಪರ್ವತಜನನ ಕಾಲವೆನ್ನುವರು. ಟೆತಿಸ್ ಮಹಾಸಾಗರದಲ್ಲಿ ನಿಕ್ಷೇಪಗೊಂಡಿದ್ದ ಬೃಹತ್ ಜಲಜಶಿಲಾಸ್ತರಗಳು ಭೂ ಚಟುವಟಿಕೆಗಳಿಂದಾಗಿ ಮಡಿಕೆಬಿದ್ದು ಮೇಲಕ್ಕೆ ಎತ್ತಲ್ಪಟ್ಟು ಮೇರುಪರ್ವತಗಳಾದವು. ಬಹುಶಃ ಪ್ಲಿಯೋಸೀನ್ ಉಪಯುಗದ (11-1) ವೇಳೆಗೆ ಇಡೀ ಟೆತಿಸ್ ಸಾಗರ-ಈಗಿನ ಮೆಡಿಟರೇನಿಯನ್ ಸಮುದ್ರ ಪ್ರದೇಶವನ್ನು ಹೊರತು-ನೆಲಭಾಗವಾಗಿ, ಪರ್ವತಶ್ರೇಣಿಗಳಾಗಿ ಮಾರ್ಪಟ್ಟಿತು. ಟರ್ಷಿಯರಿ ಯುಗದ ಉದ್ದಕ್ಕೂ ಆಲ್ಪ್ಸ್-ಹಿಮಾಲಯ ಪರ್ವತಪಂಕ್ತಿ ಹಂತಹಂತವಾಗಿ ಮೇಲಕ್ಕೆ ಏರುತ್ತಲೆ ಇತ್ತು. ಇಂದಿಗೂ ಇದು ಕೊನೆಮುಟ್ಟಿಲ್ಲ. ಈ ಪರ್ವತಸ್ತೋಮಗಳ ಉದಯ ಈ ಕಾಲದಲ್ಲಿ ತಲೆದೋರಿದ ಅತ್ಯಂತ ಮಹತ್ತ್ವಪೂರ್ಣ ಘಟನೆಯೆನಿಸಿದ್ದು ಮುಂದೆ ಇಡೀ ಭೂಗೋಳದ ಮೇಲೆ ಕಾಣಿಸಿಕೊಂಡ ಜೀವರಾಶಿಗಳ ಇತಿಹಾಸದಲ್ಲಿ ತನ್ನ ಮಹತ್ತರ ಪ್ರಭಾವದ ಮುದ್ರೆಯನ್ನೊತ್ತಿದೆ. ಹೀಗೆ ಉದಯಿಸಿದ ನವೀನ ಪರ್ವತಗಳ ಸಮೀಪ ಪ್ರದೇಶಗಳಲ್ಲೇ ಆದಿಮಾನವ ನೆಲೆಗೊಂಡದ್ದು ಮತ್ತೊಂದು ಮಹತ್ತರ ಘಟನೆ. ಇಂಡಿಯ ಪರ್ಯಾಯ ದ್ವೀಪದಲ್ಲಿ ಇಯೊಸೀನ್ ಶಿಲೆಗಳು (60-40) ಹಲವಾರು ಕಡೆ ಕಂಡುಬಂದಿದ್ದರೂ ಸಿಂಧ್ ಪ್ರಾಂತದಲ್ಲಿ (ಈಗಿನ ಪಾಕಿಸ್ತಾನ್) ಅವು ಅತ್ಯುತ್ತಮವಾದ ರೀತಿಯಲ್ಲಿ ಪ್ರಕ್ಷೇಪಗೊಂಡಿವೆ. ಈ ಶಿಲಾಶ್ರೇಣಿಯನ್ನು ರಾಣಿಕೋಟ್, ಲಾಕಿ ಮತ್ತು ಕಿರ್ತಾರ್ ಎಂದು ಮೂರು ಹಂತಗಳಾಗಿ ವಿಭಜಿಸಿದ್ದಾರೆ. ಇದೇ ಶಿಲೆಗಳನ್ನೇ ಅಸ್ಸಾಮ್, ಬರ್ಮಾ, ಟಿಬೆಟ್, ರಾಜಸ್ತಾನ್ ಮತ್ತು ಗುಜರಾತ್‍ಗಳಲ್ಲಿ ವಿವಿಧ ಹೆಸರುಗಳಿಂದ ಗುರುತಿಸಲಾಗಿದೆ.

	ಅಲಿಗೋಸೀನ್ ಉಪಯುಗದಲ್ಲಿ (40-25) ಹಿಮಾಲಯ ಉದ್ಭವ ಮಹಾಕ್ರಿಯೆಯ ಮೊದಲ ಮತ್ತು ಎರಡನೆಯ ಹಂತಗಳನ್ನು ಭೂವಿಜ್ಞಾನಿಗಳು ಗುರುತಿಸಿದ್ದಾರೆ. ಟೆತಿಸ್ ಮಹಾಸಾಗರ ಬಲುಮಟ್ಟಿಗೆ ಪರ್ವತಪಂಕ್ತಿಗಳಾಗಿ ಜಲ ಈಗಿನ ಬಲೂಚಿಸ್ತಾನ್ ಮತ್ತು ಸಿಂಧ್ ಪ್ರಾಂತಗಳಿಗಷ್ಟೇ ಸೀಮಿತವಾಯಿತು. ಪೂರ್ವದ ಕಡೆ ಅಸ್ಸಾಮ್ ಮತ್ತು ಬರ್ಮಾಗಳ ದಕ್ಷಿಣದ ಕೆಲವು ಪ್ರದೇಶಗಳನ್ನು ಮಾತ್ರ ಟೆತಿಸ್ ಚಾಚು ಆವರಿಸಿತ್ತು. ಹಲವಾರು ಕಡೆ (ದಕ್ಷಿಣ ಇಂಡಿಯ, ಇತ್ಯಾದಿ) ಸಮುದ್ರಾಕ್ರಮಣವೂ ನಡೆಯಿತು. ಮಯೊಸೀನ್ (21-11) ಶಿಲೆಗಳು ಇಂಡಿಯದ ಹಲವಾರು ಕಡೆ ದೊರೆತಿವೆ. ಸಿಂಧ್ ಪ್ರಾಂತದ ನಾಮ್ ಮತ್ತು ಗಾeóï ಶಿಲಾಸ್ತರಗಳು, ಕಾಶ್ಮೀರದ ಮರ್ರಿ ಶ್ರೇಣಿ, ಸಿಮ್ಲಾದ ಡಾಗ್‍ಷಾಯ್ ಮತ್ತು ಕಸೌಲಿ ಹಾಗೂ ಅಸ್ಸಾಮಿನ ಬರೈಲ್ ಶಿಲಾಸ್ತರಗಳನ್ನು ಉಲ್ಲೇಖಿಸಬಹುದು. ಕೇರಳ ತೀರದ ವರ್ಕಲಾ ಮತ್ತು ತಮಿಳುನಾಡಿನ ಕಡಲೂರು ಶಿಲಾನಿಕ್ಷೇಪಗಳೂ ಈ ಕಾಲದವೇ. ಹಿಮಾಲಯವೂ ಮತ್ತೆ ಮೇಲೇರಿತು. ಪರ್ವತಶ್ರೇಣಿಗಳ ದಕ್ಷಿಣ ಅಂಚಿನುದ್ದಕ್ಕೂ ದೊಡ್ಡ ಕೊರಕಲೊಂದು ತಲೆದೋರಿ ಹಿಮಾಲಯದ ನದಿಗಳು ಹೊತ್ತುತಂದ ಮೆಕ್ಕಲು ಹಾಗೂ ಶಿಲಾಛಿದ್ರಗಳು ಈ ತಗ್ಗಿನಲ್ಲಿ ನಿಕ್ಷೇಪಗೊಂಡವು. ಸಿಂಧೂ ನದಿಯಿಂದ ಮೊದಲಾಗಿ ಬ್ರಹ್ಮಪುತ್ರ ನದಿಯ ತನಕ ವ್ಯಾಪಿಸಿರುವ ಈ ಶಿಲಾನಿಕ್ಷೇಪ ಹರಿದ್ವಾರದ ಬಳಿ ಇರುವ ಸಿವಾಲಿಕ್ ಬೆಟ್ಟಗಳಲ್ಲಿ ಅತ್ಯಂತ ಉತ್ತಮವಾದ ರೀತಿಯಲ್ಲಿ ನಿಕ್ಷೇಪಗೊಂಡಿರುವ ಕಾರಣ ಇವನ್ನು ಸಿವಾಲಿಕ್ ನಿಕ್ಷೇಪಗಳೆಂದೇ ಹೆಸರಿಸಿದ್ದಾರೆ. ಇವುಗಳಲ್ಲಿ ಹುದುಗಿರುವ ಅಸಂಖ್ಯಾತ ಫಾಸಿಲುಗಳು ಅದರಲ್ಲೂ ಸಸ್ತನಿಗಳು ಬಹುಪ್ರಸಿದ್ಧವಾದವು.

	ಟರ್ಷಿಯರಿ ಯುಗದ (65-1) ಜಲಜಶಿಲಾ ನಿಕ್ಷೇಪಗಳು ಸಹ ವಿಶಿಷ್ಟ ಲಕ್ಷಣಗಳಿಂದ ಒಡಗೂಡಿವೆ. ಅವು ಬಹುವಿಸ್ತಾರವಾದ ಪ್ರದೇಶವನ್ನು ಆವರಿಸಿರುವುದೇ ಅಲ್ಲದೆ ಅವುಗಳಲ್ಲಿ ಪ್ರಮುಖ ಕಶೇರುಕ (ಬೆನ್ನೆಲುಬಿನ ಪ್ರಾಣಿಗಳು) ಹಾಗೂ ಸಸ್ಯವರ್ಗಗಳ ಅವಶೇಷಗಳೂ ಅತ್ಯುತ್ತಮ ಖನಿಜ ನಿಕ್ಷೇಪಗಳೂ ಹುದುಗಿರುವುದು ಈ ಭೂಯುಗದ ಮತ್ತೊಂದು ವೈಶಿಷ್ಟ್ಯ. ಹಲವಾರು ನಿಕ್ಷೇಪಗಳು ಹೆಚ್ಚಿನ ಭೂಚಟುವಟಿಕೆಗಳಿಗೆ ಒಳಗಾಗದಿರುವ ಕಾರಣ ತಮ್ಮ ಆದ್ಯಲಕ್ಷಣಗಳನ್ನೇ ತಳೆದಿರುವುದು ಮತ್ತೊಂದು ವಿಶೇಷ. ಅಲ್ಲದೆ ನಿಕ್ಷೇಪಗಳಲ್ಲಿ ನೆಲಭಾಗಗಳ ಲಕ್ಷಣಗಳನ್ನು ಬಹುವಾಗಿ ಗುರುತಿಸಲು ಸಹ ಸಾಧ್ಯವಾಗಿದೆ. ನದೀ ಮುಖಜಭೂಮಿ, ಸರೋವರ, ಜೌಗು, ಲಗೂನ್, ಮರುಭೂಮಿ, ಪ್ರವಾಹ ಪ್ರದೇಶ, ನದೀಪಾತ್ರ, ಕಂದರಗಳು-ಹೀಗೆ ಹತ್ತು ಹಲವಾರು ಭೂಮಿಯ ಮೇಲ್ಮೈ ಲಕ್ಷಣಗಳನ್ನು ಪುನರ್ನಿರ್ಮಿಸಲು ಸಹ ಸಾಧ್ಯವೆನಿಸಿದೆ. ಜ್ವಾಲಾಮುಖಿಜ ನಿಕ್ಷೇಪಗಳು ಬಹು ವಿಶಾಲವಾಗಿ ಹರಡಿರುವುದರ ಜೊತೆಗೆ ಕೆಲವೆಡೆ ಜಲಜಶಿಲಾಸ್ತರಗಳೊಡನೆ ಹಾಸುಹೊಕ್ಕಾಗಿ ಕೂಡ ಬೆರೆತಿವೆ. ಅಮೆರಿಕ ಸಂಯುಕ್ತಸಂಸ್ಥಾನಗಳ ಪಶ್ಚಿಮ ಪ್ರದೇಶದಲ್ಲಿ ಇಡೀ ಟರ್ಷಿಯರಿ ಶಿಲಾ ಸರಣಿಯನ್ನು ಗುರುತಿಸಲು ಸಾಧ್ಯ. ಅದರಲ್ಲೂ ವ್ಯೋಮಿಂಗ್ ಪ್ರಾಂತದ ಬಿಗ್‍ಹಾರ್ನ್ ಇಳುಕಲು ಮತ್ತು ನ್ಯೂಮೆಕ್ಸಿಕೋದ ಸಾನ್‍ಜುವಾನ್ ಇಳುಕಲು ಪ್ರದೇಶಗಳಲ್ಲಿ ಪೇಲಿಯೊಸೀನ್ (65-60) ಶ್ರೇಣಿಯನ್ನು ಅತ್ಯುತ್ತಮವಾದ ರೀತಿಯಲ್ಲಿ ಕಾಣಬಹುದು. ಮೊಂಟಾನಾ ಮತ್ತು ಡಕೋಟಾ ಪ್ರಾಂತಗಳ ಬಯಲು ಪ್ರದೇಶದಲ್ಲೂ ಈ ಶಿಲಾನಿಕ್ಷೇಪಗಳು ಸಾವಿರಾರು ಕಿ.ಮೀ.ಗಳಷ್ಟು ವಿಸ್ತಾರವಾಗಿ ಹರಡಿವೆ. ಇವುಗಳಲ್ಲಿ ಬಹುಮುಖ್ಯವಾದವು ಮರಳುಶಿಲೆ, ಜೇಡುಶಿಲೆ ಹಾಗೂ ಇವುಗಳ ಒಡನಿರುವ ಕಡಿಮೆ ದರ್ಜೆಯ ಕಲ್ಲಿದ್ದಲ ನಿಕ್ಷೇಪಗಳು. ಇವುಗಳಲ್ಲಿರುವ ಫಾಸಿಲುಗಳನ್ನು ಆಧರಿಸಿ ಈ ಭೂಭಾಗಗಳಲ್ಲಿ ಅರೆಸಮಶೀತೋಷ್ಣ ಹವೆಯಿದ್ದಿತೆನ್ನಲಾಗಿದೆ. ಇಯೊಸೀನ್ (60-40) ಹಂತದಲ್ಲಿ ಕೊಲರ್ಯಾಡೊ, ಊಟಾ ಮತ್ತು ವ್ಯೋಮಿಂಗ್ ಪ್ರಾಂತಗಳಲ್ಲೂ ಅವುಗಳ ನೆರೆಯ ದೇಶಗಳಲ್ಲೂ ದೊಡ್ಡ ಸರೋವರಗಳು ಕಾಣಿಸಿಕೊಂಡವು. ಗ್ರೀನ್ ರಿವರ್‍ಲೇಕ್ ಶಿಲಾಶ್ರೇಣಿ ಸುಮಾರು 40,000 ಚದರ ಮೈಲುಗಳಷ್ಟು ವಿಸ್ತಾರ ಪ್ರದೇಶವನ್ನು ಆಕ್ರಮಿಸಿತ್ತು. ಈ ಸರೋವರದಲ್ಲಿದ್ದ ಸಸ್ಯಗಳು ಹಗೂ ಪ್ರಾಣಿಗಳ ಅವಶೇಷಗಳು ಅಸಂಖ್ಯಾತ. ಇವು ಆ ಕಾಲದ ಶಿಲಾಸ್ತರಗಳಲ್ಲಿ ಹುದುಗಿವೆ. ಇವು ಅತ್ಯಂತ ಭಾರಿ ಪ್ರಮಾಣದ ತೈಲನಿಕ್ಷೇಪಗಳೂ ಆಗಿವೆ. ಆಲಿಗೊಸೀನ್ (40-25) ಹಂತದಲ್ಲಿ ವ್ಯೋಮಿಂಗ್‍ನ ಎಲ್ಲೊಸ್ಟೋನ್ ಪಾರ್ಕ್ ಮತ್ತು ಕೊಲರ್ಯಾಡೋವಿನ ಸ್ಯಾನ್‍ಜುವಾನ್ ಪರ್ವತ ಪ್ರದೇಶಗಳಲ್ಲಿ ಜ್ವಾಲಾಮುಖಿಗಳ ಚಟುವಟಿಕೆ ಮೊದಲಾಯಿತು. ಈ ಕಾಲದ ಶಿಲಾನಿಕ್ಷೇಪಗಳಲ್ಲಿ ಬಹುಮುಖ್ಯವಾದವೆಂದರೆ ಕೊಲರ್ಯಾಡೊ, ವ್ಯೋಮಿಂಗ್, ಗೆಬ್ರಾಸ್ಕ (ನೆಬ್ರಾಸ್ಕ), ದಕ್ಷಿಣ ಡಕೋಟಾ ಪ್ರಾಂತಗಳ ಪ್ರಸಿದ್ಧವಾದ ವೈಟ್‍ರಿವರ್ ಶಿಲಾಸ್ತರಗಳು. ಇವುಗಳಲ್ಲಿ ಅತ್ಯಂತ ಉತ್ತಮದರ್ಜೆಯ ಸಸ್ತನಿಗಳ ಫಾಸಿಲುಗಳು ಹೇರಳವಾಗಿ ಹುದುಗಿವೆ. ಈ ಹಂತದ ಮೊದಲಲ್ಲಿ ಜರ್ಮನಿ ಮತ್ತು ರಷ್ಯಗಳು ಸೇರಿದಂತೆ ಮಧ್ಯ ಯೂರೋಪಿನ ಬಹುಭಾಗ ಸಮುದ್ರಾಕ್ರಮಣಕ್ಕೆ ಸಿಲುಕಿತು. ಮೃದ್ವಂಗಿಗಳು ಈ ಕಾಲದ ವಿಶಿಷ್ಟ ಜೀವಿಗಳು. ಕೋನಿಫೆರ್ ವೃಕ್ಷಗಳಿಂದ ಸ್ರವಿಸಿದ ಗೋಂದು (ಆ್ಯಂಬರ್) ಈ ಯುಗದ ಬಲು ಪ್ರಸಿದ್ಧ ನಿಕ್ಷೇಪವಾಗಿದ್ದು ಇದರಲ್ಲಿ ಆ ಕಾಲದ ಸಣ್ಣಪುಟ್ಟ ಕ್ರಿಮಿಕೀಟಗಳು ಅಡಕವಾಗಿದ್ದು ಅವುಗಳ ಇಡೀ ದೇಹಗಳು ಅಚ್ಚಳಿಯದಂತೆ ರಕ್ಷಿಸಲ್ಪಟ್ಟಿರುವುದೊಂದು ವಿಶೇಷ. ಇದಾದಮೇಲಿನ ಮಯೊಸೀನ್ ಉಪಯುಗದಲ್ಲಿ (25-11) ಉತ್ತರ ಅಮೆರಿಕದ ಬಹು ಭಾಗ ಮೇಲಕ್ಕೆ ಎತ್ತಲ್ಪಟ್ಟಿತು. ರಾಕಿಪರ್ವತಶ್ರೇಣಿ ಸಾವಿರಾರು ಮೀಟರುಗಳ ಎತ್ತರವನ್ನು ಮುಟ್ಟಿ ಒಣ ಹಾಗೂ ತಂಪುಹವೆಯಿಂದ ಕೂಡಿತ್ತು. ದಿನೇ ದಿನೇ ವಾಯುಗುಣ ಶೀತಲಿಸುತ್ತ ಬಂದು ಅನೇಕ ಸಸ್ತನಿಗಳು ಉಷ್ಣಪ್ರದೇಶಗಳಿಗೆ ವಲಸೆ ಹೋದವು. ಚಳಿಯನ್ನು ತಡೆಯಲಾರದೆ ಕೆಲವು ನಿರ್ನಾಮಗೊಂಡವು. ಒಟ್ಟಿನಲ್ಲಿ ಮುಂಬರಲಿರುವ ಪ್ಲೀಸ್ಟೊಸೀನ್ ಹಿಮಯುಗದ (1-0) ತಕ್ಕ ಪರಿಸರದ ನಿರ್ಮಾಣ ಮೊದಲಾಯಿತು.

	ಟರ್ಷಿಯರಿ ಜೀವರಾಶಿಗಳು: ಈ ಯುಗದ ಜೀವರಾಶಿಗಳ ವೈಶಿಷ್ಟ್ಯಗಳಿಗೆ ಕಾರಣ ಅಂದಿನ ಪರಿಸರ. ಭೂಭಾಗಗಳು ಎತ್ತರ ಹಾಗೂ ಕಡಿದಾಗಿದ್ದವು. ವಾಯುಗುಣದಲ್ಲಿ ಹೆಚ್ಚಿನ ಏರುಪೇರುಗಳಿದ್ದವು. ಹೀಗಾಗಿ ಜೀವರಾಶಿಗಳು ಈ ಸನ್ನಿವೇಶಗಳಿಗೆ ಹೊಂದಿಕೊಂಡು ಜೀವಿಸುವ ಸಾಮಥ್ರ್ಯವನ್ನು ಪಡೆಯಬೇಕಾಯಿತು. ಎಲ್ಲ ಪ್ರಮುಖ ಸಸ್ಯವರ್ಗಗಳ ಅವಶೇಷಗಳೂ ಈ ಯುಗದ ಶಿಲೆಗಳಲ್ಲಿವೆ. ಬಲುಮೃದುಸಸ್ಯಗಳಾದ ಪಾಚಿ, ಬೂಷ್ಟು, ಮೋಲ್ಡ್ ಮತ್ತು ಬ್ಯಾಕ್ಟೀರಿಯಾಗಳ ಅವಶೇಷಗಳನ್ನು ಸಹ ಶಿಲೆಗಳಲ್ಲಿ ಕಾಣಬಹುದು. ಗತಕಾಲದ ಪ್ರಮುಖ ಸಸ್ಯವರ್ಗಗಳಾದ ಕ್ಲಬ್ ಮಾಸಸ್, ಕುದುರೆ ಬಾಲಗಳು, ಜರೀಗಿಡಗಳು, ಗಿಂಗ್ಕೋಗಳು ಮತ್ತು ಸೈಕ್ಯಾಡುಗಳ ಹಲವಾರು ಅವಶೇಷಗಳಿವೆ. ಇವೆಲ್ಲಕ್ಕೂ ಮಿಗಿಲಾಗಿ ಶಂಕುಧಾರಿಗಳು (ಕಾನಿಫರ್ಸ್) ಮತ್ತು ಹೂಬಿಡುವ ಸಸ್ಯವರ್ಗದವು ಹೇರಳವಾಗಿದ್ದುವು. ಇಂದಿನ ಹೂಬಿಡುವ ಸಸ್ಯವರ್ಗದ ಪ್ರಭೇದಗಳೆಲ್ಲವೂ ಮಯೊಸೀನ್ ಕಾಲದಲ್ಲಿ (25-11) ಪ್ರವರ್ಧಮಾನಕ್ಕೆ ಬಂದಿದ್ದುವು. ಇವುಗಳ ಕಾಂಡ, ರೆಂಬೆಗಳು, ಎಲೆಗಳು, ಹೂಗಳು ಮತ್ತು ಪರಾಗ ಬೀಜಾಣುಗಳ ಅಸಂಖ್ಯಾತ ಅವಶೇಷಗಳಿವೆ. ಸೂಕ್ತಸನ್ನಿವೇಶವಿದ್ದ ಪ್ರದೇಶಗಳಲ್ಲಿ ಈ ಸಸ್ಯರಾಶಿ ಕಲ್ಲಿದ್ದಲಿನ ನಿಕ್ಷೇಪಗಳಾಗಿ ಪರಿವರ್ತಿತವಾಗಿದೆ. ಹಲವಾರು ಸಸ್ಯವರ್ಗಗಳು ವಾಯುಗುಣಕ್ಕೆ ಅನುಗುಣವಾಗಿ ವಲಸೆ ಹೋದ ಪ್ರಸಂಗಗಳೂ ಉಂಟು. ಈ ತೆರನಾದ ಪ್ರಸಾರ ಆಲ್ಪ್ಸ್-ಹಿಮಾಲಯ ಶ್ರೇಣಿಯ ಜನನದಿಂದ ಪ್ರಭಾವಿತವಾಗಿತ್ತು.

	ಪ್ರಾಣಿವರ್ಗಗಳು: ಈ ಯುಗದ ಬಹುಮುಖ್ಯವಾದ ಅಕಶೇರುಕ ಸಮುದ್ರೀಯ ಪ್ರಾಣಿಗಳೆಂದರೆ ಫೊರಾಮಿನಿಫೆರ, ಪೆಲಿಸಿಪಾಡ್, ಗ್ಯಾಸ್ಟ್ರೊಪಾಡ್, ಕಾರಲ್‍ಗಳು ಮತ್ತು ಕ್ರಸ್ಟೇಷಿಯನ್‍ಗಳು. ಫೊರಾಮಿನಿಫೆರ ವರ್ಗದ ಜೀವಿಗಳು ಅಸಂಖ್ಯಾತ ಮಾದರಿಯಲ್ಲಿದ್ದು ಸಮುದ್ರತಳದ ಹಲವಾರು ನಿಕ್ಷೇಪಗಳು ಹಾಗೂ ತೈಲನಿಕ್ಷೇಪಗಳಿಗೆ ಮೂಲಕಾರಣವೆನಿಸಿವೆ. ಕಶೇರುಕ ಪ್ರಾಣಿಗಳಲ್ಲಿ ಸಸ್ತನಿಗಳು ಹೇರಳವಾಗಿದ್ದು ಟರ್ಷಿಯರಿ ಯುಗವನ್ನು ಸಸ್ತನಿಗಳ ಯುಗವೆಂದೇ ಹೆಸರಿಸಿದ್ದಾರೆ. ಇದರ ಜೊತೆಯಲ್ಲೇ ವಿವಿಧ ಪಕ್ಷಿಗಳು, ಟೀಲಿಯಾಸ್ಟ್ ಮೀನುಗಳೂ ಅಷ್ಟೇ ಹೇರಳವಾದ ಪ್ರಮಾಣದಲ್ಲಿದ್ದುವು. ನಿಯತತಾಪ (ವಾರ್ಮ್ ಬ್ಲಡೆಡ್) ಪ್ರಾಣಿಗಳದೆ ಮೇಲುಗೈ. ಅನೇಕವು ಮಾಂಸಾಹಾರಿಗಳಾಗಿಯೂ ಇದ್ದುವು. ಪೆಲಿಯೊಸೀನ್ ಉಪಯುಗದ (65-60) ವೇಳೆ ಯೂರೋಪ್ ಮತ್ತು ಉತ್ತರ ಅಮೆರಿಕಗಳಲ್ಲಿ ಒಂದೇ ತೆರನಾದ ಪ್ರಾಣಿವರ್ಗಗಳಿದ್ದು ಈ ಎರಡು ಖಂಡಗಳೂ ನೆಲ ಸೇತುವೆಯಿಂದ ಬಂಧಿತವಾಗಿದ್ದುವು. ಆದರೆ ದಕ್ಷಿಣ ಅಮೆರಿಕದ ಪ್ರಾಣಿಸಂಕುಲವೇ ಬೇರೆ. ಇಯೊಸೀನ್ ಉಪಯುಗದ (60-40) ವೇಳೆಗೆ ಮತ್ತಷ್ಟು ಹೊಸ ವರ್ಗಗಳು ಕೂಡಿಕೊಂಡುವು. ಮಾಂಸಾಹಾರಿಗಳಲ್ಲಿ ಇಂದಿನ ನಾಯಿ, ಬೆಕ್ಕು ಕತ್ತೆ ಕಿರುಬ ಮುಂತಾದ ಪ್ರಾಣಿಗಳ ಪೂರ್ವಜರನ್ನು ಕಾಣಬಹುದು. ಮೊತ್ತಮೊದಲಿಗೆ ಗೊರಸುಗಾಲಿನ ಪ್ರಾಣಿಗಳು ಕಂಡುಬಂದುವು. ಇಯೊಹಿಪ್ಪಸ್ ಎಂಬ ಕುದುರೆ, ಟೇಪರ್ (ಹಂದಿಯಂಥದು) ಹಾಗೂ ಘೇಂಡಾಮೃಗ ಈ ವರ್ಗದ ಪ್ರಾಣಿಗಳ ಉದಯವಾಯಿತು. ಗೊರಸುಗಾಲಿನ ಪ್ರಾಣಿಗಳಲ್ಲಿ ಎರಡು ಬಗೆ: ಪೆರಿಸೊಡ್ಯಾಕ್ಟಿಲ್ (ಅಸಮಗೊರಸಿನವು) ಮತ್ತು ಆರ್ಟಿಯೊಡ್ಯಾಕ್ಟಿಲ್ (ಸಮ ಗೊರಸಿನವು). ಈ ಎರಡು ವರ್ಗದ ಪ್ರಾಣಿಗಳೂ ನೆಲದ ಮೇಲೆ ಓಡಾಡಿದ ಕುರುಹುಗಳಿವೆ. ಎರಡನೆಯ ವರ್ಗದಲ್ಲಿ ಇಂದಿನ ಒಂಟೆ, ಜಿಂಕೆ, ಹಂದಿ ಇತ್ಯಾದಿಗಳ ಪೂರ್ವಜರನ್ನು ಗುರುತಿಸಲಾಗಿದೆ. ಮೊಲಗಳು ಹಾಗೂ ಇತರ ಸಣ್ಣ ಸಸ್ತನಿಗಳು (ಉದಾಹರಣೆಗೆ ಇಲಿ, ಹೆಗ್ಗಣ ವರ್ಗದ ದಂಶಕಗಳು ಹಾಗೂ ಮಂಗಗಳು) ಅಸಂಖ್ಯಾತ ಬಾವಲಿ ಮತ್ತು ತಿಮಿಂಗಲಗಳು ಮೊದಲ ಬಾರಿಗೆ ಕಾಣಿಸಿಕೊಂಡುವು. ದಕ್ಷಿಣ ಅಮೆರಿಕದ ಇತರ ಭೂಖಂಡಗಳಿಂದ ನಿರ್ದಿಷ್ಟವಾಗಿ ಬೇರೆ ಆಗಿತ್ತು. ಅದು ವಿವಿಧ ಜಾತಿಯ ಸಸ್ಯಾಹಾರಿಗಳ ತೌರಾಗಿತ್ತು. ಇಯೊಸೀನಿನ (60-40) ಅಂತ್ಯದ ವೇಳೆಗೆ ಈಗ ಕಂಡುಬರುವ ಹಲವಾರು ಸಸ್ತನಿಗಳು (ಉದಾಹರಣೆಗೆ ಬೀವರ್, ಇಲಿ, ಹೆಗ್ಗಣ ಮುಂತಾದವು) ಅಸಂಖ್ಯಾತವಾಗಿ ಗೋಚರಿಸಿದುವು. ಕುರಿಯೂ ಮೊದಲ ಬಾರಿಗೆ ಕಾಣಿಸಿಕೊಂಡಿತು. ಉತ್ತರ ಭೂಖಂಡಗಳ ಹವೆ ಕ್ರಮೇಣ ತಣ್ಣಗಾಗುತ್ತ ಬಂತು. ಹೀಗಾಗಿ ಉತ್ತರ ಅಮೆರಿಕದ ಕಾಡುಗಳಲ್ಲಿ ತಾವೇ ತಾವಾಗಿ ಮೆರೆಯುತ್ತಿದ್ದ ಉಷ್ಣಹವೆಯ ಹಲವಾರು ಜೀವಿವರ್ಗಗಳು (ಉದಾಹರಣೆ ಮಂಗಗಳು) ಕ್ಷೀಣಿಸಿ ಕ್ರಮೇಣ ಹೇಳಹೆಸರಿಲ್ಲದಂತಾದುವು. ಹವಾ ಬದಲಿಕೆಯನ್ನು ಎದುರಿಸಿ ನಿಲ್ಲಬಲ್ಲ ಹಾಗೂ ಹುಲ್ಲು ತಿಂದು ಜೀವಿಸಬಲ್ಲ ಪ್ರಾಣಿವರ್ಗಗಳು ಹೆಚ್ಚಾದುವು ಮಯೊಸೀನ್ ಉಪಯುಗದಲ್ಲಿ (25-11) ಮೂರು ಬೆರಳಿನ ಗೊರಸಿನ ಕುದುರೆ, ಬೃಹದಾಕಾರದ ಒಂಟೆ, ಹಂದಿ, ಆನೆ ಮತ್ತು ಜಿಂಕೆಗಳ ಪೂರ್ವಜರನ್ನೂ ಗುರುತಿಸಲಾಗಿದೆ. ಇಂದಿನ ಚಿರತೆ ಮತ್ತು ಹುಲಿಗಳನ್ನು ಹೋಲುವ ಬೆಕ್ಕುಗಳು, ಕರಡಿ ಮೊದಲಾದ ಮಾಂಸಾಹಾರಿ ಪ್ರಾಣಿಗಳು ಕಾಡುಗಳಲ್ಲಿ ಅಲೆದಾಡುತ್ತಿದ್ದುವು. ಈ ಕಾಲದ ಕೆನ್ಯಾಪಿಥಿಕಸ್ ಮತ್ತು ರಾಮಪಿಥಿಕಸ್ ಎಂಬ ವಾನರವರ್ಗದ ಪ್ರಾಣಿಗಳು ಮಾನವನ ಪೂರ್ವಜರಿರಬಹುದೆಂದು ಊಹಿಸಲಾಗಿದೆ. ಮುಂದೆ ಟರ್ಷಿಯರಿ ಯುಗದ ಅಂತ್ಯದಲ್ಲಿ ಕಾಣಿಸಿಕೊಂಡ ಆಸ್ಟ್ರಲೊಪಿಥಿಕಸ್ ಎಂಬ ವಾನರಜೀವಿ ಅತಿ ಒಡ್ಡೊಡ್ಡಾದ ಅಯುಧಗಳು ನಿರ್ಮಾಣದಲ್ಲಿ ತೊಡಗಿತ್ತೆಂದೂ ಭಾವಿಸಲಾಗಿದೆ. ಪ್ಲಿಯೊ ಸೀನ್ ಉಪಯುಗದ (11-1) ವೇಳೆಗೆ ವಾಯುಗುಣದಲ್ಲಿ ಬಲು ಶೈತ್ಯ ಉಂಟಾಗಿ ಮುಂಬರಲಿದ್ದ ಹಿಮಯುಗಕ್ಕೆ ಮುನ್ಸೂಚನೆ ಎನಿಸಿತು. ಈ ಕಾಲದಲ್ಲಿದ್ದ ಪ್ರಾಣಿಗಳು ಶೀತಹವೆಗೆ ಒಗ್ಗಿದ ದೇಹರಚನೆಯನ್ನು ತಳೆದಿದ್ದುವು. ಆಗಾಗ ಉತ್ತರ ಭೂಖಂಡಗಳ ಮತ್ತು ಆಫ್ರಿಕಗಳ ನಡುವೆ ಪ್ರಾಣಿಗಳು ವಲಸೆ ಹೋಗುತ್ತಿದ್ದುವು. ಇಷ್ಟಾದರೂ ದಕ್ಷಿಣ ಅಮೆರಿಕ ಮಾತ್ರ ಎಂದಿನಂತೆ ಇತರ ಖಂಡಗಳ ಸಂಪರ್ಕವಿಲ್ಲದೆ ಬೇರೆ ಆಗಿಯೇ ಉಳಿದಿತ್ತು. ಆದರೆ ಯುಗಾಂತ್ಯದಲ್ಲಿ ಉತ್ತರ ಹಾಗೂ ದಕ್ಷಿಣ ಅಮೆರಿಕಗಳ ನಡುವೆ ಭೂಸೇತುವೆ ಉದ್ಭವವಾಗಿ ಎರಡು ಖಂಡಗಳ ನಡುವೆ ಪ್ರಾಣಿವರ್ಗಗಳ ಅಲೆದಾಟ ಮೊದಲಾಯಿತು. ದಕ್ಷಿಣ ಅಮೆರಿಕದ ಅನೇಕ ಸಾಧುಪ್ರಾಣಿಗಳು ಹೀಗೆ ಹೊಸದಾಗಿ ವಲಸೆಬಂದ ಶತ್ರುಗಳ ದಾಳಿಯನ್ನು ತಡೆಯಲಾರದೆ ವಂಶನಷ್ಟಗೊಂಡವು. ಒಟ್ಟಿನಲ್ಲಿ ಕೇವಲ ಬಲಿಷ್ಠ ಹಾಗೂ ನೈಸರ್ಗಿಕ ಏರುಪೆರುಗಳನ್ನು ನಿಭಾಯಿಸಬಲ್ಲ ಪ್ರಾಣಿವರ್ಗಗಳು ಮಾತ್ರ ಉಳಿದುಕೊಂಡವು. ಭೂಮೇಲ್ಮೈಲಕ್ಷಣಗಳಲ್ಲಿ ತೋರಿಬಂದ ತೀವ್ರ ಬದಲಾವಣೆಗಳ ಕಾರಣ ಸಾಗರತೀರಪ್ರದೇಶಗಳಲ್ಲಿ ಮನೆಮಾಡಿದ್ದ ಅನೇಕ ಸಮುದ್ರಜೀವಿಗಳು ಆಳಭಾಗಳಿಗೆ ವಲಸೆ ಹೋದ ನಿದರ್ಶನಗಳಿವೆ. ಈ ಯುಗದಲ್ಲಿ ಸಸ್ತನಿಗಳದೇ ಮೇಲುಗೈ. ಇನ್ನಿತರ ಪ್ರಾಣಿಗಳು ಗೌಣ. ಇದಕ್ಕೆ ಮುಖ್ಯಕಾರಣ ಇವುಗಳ ಶರೀರ ಲಕ್ಷಣಗಳು-ಚಳಿಯನ್ನು ತಡೆಯಬಲ್ಲ ನಿಯತತಾಪ ರಕ್ತ, ತುಪ್ಪಳದಿಂದ ಕೂಡಿದ ಹೊರಮೈ ಹಾಗೂ ಗಟ್ಟಿಮುಟ್ಟಾದ ಕಂಕಾಲ; ಇವೆಲ್ಲಕ್ಕೂ ಮಿಗಿಲೆನಿಸಿ ಈ ಪ್ರಾಣಿಗಳ ಬುದ್ಧಿಚಾತುರ್ಯಕ್ಕೆ ಆಗರವಾದ ಮಿದುಳು ಹಾಗೂ ಅದರ ಕ್ರಮಾನುಗತವಾದ ವಿಕಾಸ. ಇಡೀ ಯುಗದುದ್ದಕ್ಕೂ ಮಿದುಳು ಗಾತ್ರದಲ್ಲಿ ದೊಡ್ಡದಾಗುತ್ತ ಅದರ ಪ್ರಧಾನ ಮಸ್ತಿಷ್ಕವೂ ಗಾತ್ರದಲ್ಲಿ ಬೆಳೆದು ಮಿದುಳಿನ ಕಾರ್ಯಾಚರಣೆಯಲ್ಲಿ ಅದರ ಪಾತ್ರದ ಪ್ರಾಮುಖ್ಯ ಹೆಚ್ಚುತ್ತ ಹೋಯಿತು. ಇದರಿಂದಲೇ ಕೆಲವು ಸಸ್ತನಿಗಳು ತಮಗಿಂತ ಪ್ರಬಲವಾದ ಶತ್ರುಗಳ ಹಾವಳಿಯನ್ನು ಮೆಟ್ಟಿನಿಲ್ಲಲು ಸಮರ್ಥವಾದುವು. ಟರ್ಷಿಯರಿ ಯುಗದಲ್ಲಂತೂ ಸಸ್ತನಿಗಳ ಬೌದ್ಧಿಕ ಬೆಳೆವಣಿಗೆ ಹಾಗೂ ಪರಿಸರ ಸಾಮಥ್ರ್ಯ ಪ್ರಧಾನ ಲಕ್ಷಣಗಳೆನಿಸಿವೆ. ಸಸ್ಯವರ್ಗಗಳ ವಿಕಾಸವನ್ನುಅವಲೋಕಿಸಿದಲ್ಲಿ ಈ ಯುಗದಲ್ಲಿ ಯಾವ ಮಹತ್ತರ ಬದಲಾವಣೆಯೂ ಆದ ಹಾಗೆ ಕಂಡುಬಂದಿಲ್ಲ. ಭೂಮಿಯ ಮೇಲ್ಮೈ ಲಕ್ಷಣ ಹಾಗೂ ವಾಯುಗುಣದಲ್ಲಾದ ವ್ಯತ್ಯಾಸಗಳಿಗೆ ಅನುಗಣವಾಗಿ ಇವುಗಳ ತೀವ್ರಗತಿಗಳನ್ನು ಗುರುತಿಸಬಹುದು. ಯುಗದ ಕಡೆಯ ಹಂತಗಳಲ್ಲಂತೂ ಹುಲ್ಲಿನ ಜಾತಿಯ ಸಸ್ಯವರ್ಗಗಳು ಪ್ರಾಮುಖ್ಯವನ್ನು ತಳೆದದ್ದು ಈ ಯುಗದ ವಿಶೇಷ.

	ಖನಿಜ ನಿಕ್ಷೇಪಗಳು: ಟರ್ಷಿಯರಿ ಅಷ್ಟು ದೊಡ್ಡ ಯುಗವಲ್ಲ, ನಿಜ. ಆದರೆ ಈ ಯುಗದ ಶಿಲಾಸ್ತರಗಳು ಕಲ್ಲಿದ್ದಲು, ತೈಲ ಮತ್ತು ನೈಸರ್ಗಿಕ ಅನಿಲವೇ ಮುಂತಾದ ಪ್ರಮುಖ ಇಂಧನ ನಿಕ್ಷೇಪಗಳಿಗೆ ಆಗರವೆನಿಸಿವೆ. ಪಶ್ಚಿಮಾರ್ಧಗೋಳದ ಈ ಯುಗದ ಶಿಲೆಗಳಲ್ಲಿ ಲೋಹಖನಿಜಗಳ ಉತ್ತಮ ನಿಕ್ಷೇಪಗಳನ್ನು ಹಲವಾರು ಕಡೆ ಕಾಣಲು ಸಾಧ್ಯ. ಪ್ರಪಂಚದ ನಾನಾಕಡೆ ಹರಡಿರುವ ತೈಲಬಾವಿಗಳಲ್ಲಿ ಸುಮಾರು ಅರ್ಧಕ್ಕರ್ಧ ಟರ್ಷಿಯರಿ ನಿಕ್ಷೇಪಗಳನ್ನೇ ಅವಲಂಬಿಸಿವೆ ಎಂದರೆ ಉತ್ಪ್ರೇಕ್ಷೆ ಅಲ್ಲ. ಇಡೀ ಪ್ರಪಂಚದ ತೈಲನಿಕ್ಷೇಪಗಳ ಒಟ್ಟು ದಾಸ್ತಾನಿನ ಶೇಕಡಾ 38ರಷ್ಟು ಭಾಗ ಈ ಯುಗದ ಶಿಲೆಗಳಲ್ಲಿ ಹುದುಗಿದೆ ಎಂದು ಅಂದಾಜು. ಪಶ್ಚಿಮ ಏಷ್ಯದ ತೈಲಸಂಪದ್ಭರಿತ ಪ್ರದೇಶಗಳಲ್ಲಿ ಆಲಿಗೊಸೀನ್ (40-25) ಮತ್ತು ಮಯೊಸೀನ್ (25-11) ಸ್ತರಗಳು ಅತ್ಯಧಿಕ. ಹೀಗೆಯೇ ಗಲ್ಫ್ ತೀರಪ್ರದೇಶ, ಕ್ಯಾಲಿಫೋರ್ನಿಯ, ವೆನಿಜûುಲ, ಕೊಲಂಬಿಯಾ, ಈಸ್ಟ್ ಇಂಡೀಸ್ ಮತ್ತು ರಷ್ಯಗಳ ತೈಲ ಹಾಗೂ ನೈಸರ್ಗಿಕ ಅನಿಲನಿಕ್ಷೇಪಗಳು ಸಹ ಟರ್ಷಿಯರಿ ಯುಗಕ್ಕೆ ಸೇರಿವೆ. ಅಮೆರಿಕ ಸಂಯುಕ್ತಸಂಸ್ಥಾನಗಳ ಪಶ್ಷಿಮ ಪ್ರಾಂತದ ಬಲು ವಿಸ್ತಾರವಾದ ಜೇಡುಶಿಲಾನಿಕ್ಷೇಪವೂ ಈ ಯುಗಕ್ಕೆ ಸೇರಿದುದು. ಇದಲ್ಲದೆ ಉತ್ತಮ ಕಲ್ಲಿದ್ದಲು ಮೊಂಟಾನ ಮತ್ತು ಡಕೋಟಾ ಪ್ರಾಂತಗಳಲ್ಲೂ ಜರ್ಮನಿ ಮತ್ತು ಫ್ರಾನ್ಸ್‍ಗಳಲ್ಲೂ ಹೇರಳವಾಗಿ ಈ ಯುಗದ ಪೆಲಿಯೊಸೀನ್ (65-60) ಮತ್ತು ಆಲಿಗೊಸೀನ್ (40-25) ಸ್ತರಗಳಲ್ಲಿ ಕಂಡುಬಂದಿದೆ. ಒಟ್ಟಿನಲ್ಲಿ ಇಡೀ ಪ್ರಪಂಚದ ನೈಸರ್ಗಿಕ ಇಂಧನದ ಬಲುಪಾಲು ಟರ್ಷಿಯರಿ ಶಿಲಾನಿಕ್ಷೇಪಗಳಿಗೆ ಸೀಮಿತ. ಇದಲ್ಲದೆ ಅಮೆರಿಕದ ರಾಕಿ-ಆ್ಯಂಡಿಸ್ ಪರ್ವತಶ್ರೇಣಿಯ ಸಮೀಪದಲ್ಲಿ ಚಿನ್ನ, ಬೆಳ್ಳಿ, ತಾಮ್ರ, ಸತು ಈ ಲೋಹಗಳ ಅದುರುನಿಕ್ಷೇಪಗಳು ಹುದುಗಿರುವುದು ಟರ್ಷಿಯರಿ ಶಿಲೆಗಳಲ್ಲೇ. ಇದೇ ಬಗೆಯ ನಿಕ್ಷೇಪಗಳನ್ನು ಪೆಸಿಫಿಕ್ ಸಾಗರದ ಮತ್ತೊಂದು ತೀರದ ಉದ್ದಕ್ಕೂ ಹರಡಿರುವ ಜಪಾನ್, ಫಿಲಿಪ್ಪೀನ್ಸ್, ಈಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಗಳಲ್ಲೂ ಕಾಣಬಹುದು. ಯೂರೋಪಿನ ಹಲವಾರು ಉತ್ತಮ ಖನಿಜ ನಿಕ್ಷೇಪಗಳು ಸಹ ಈ ಯುಗದಲ್ಲಿ ಉದ್ಭವಿಸಿದ ಆಲ್ಪೈನ್ ಪರ್ವತಜನ್ಯ ಚಟುವಟಿಕೆಗಳೊಡನೆ ನಂಟುತನವನ್ನು ಪಡೆದಿವೆ.
(ಬಿ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ